ಕೀಟ ಹಾಗೂ ರೋಗಗಳ ನಿರ್ವಹಣೆಯಲ್ಲಿ ಸೂಕ್ಷ್ಮ ಜೀವಿಗಳ ಮಹತ್ವ

ಕೃಷಿಯಲ್ಲಿ ಕೀಟಗಳು ಮತ್ತು ರೋಗಗಳ ನಿಯಂತ್ರಣವನ್ನು ಸಾಮಾನ್ಯವಾಗಿ ರಾಸಾಯನಿಕ ಕೀಟನಾಶಕಗಳನ್ನು ಬಳಸಿ ನಿರ್ವಹಿಸಲಾಗುತ್ತದೆ. ಆದರೆ, ರಾಸಾಯನಿಕ ಕೀಟನಾಶಕಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವುಗಳೆಂದರೆ, ವಿವಿಧ ರಾಸಾಯನಿಕಗಳಿಗೆ ಕೀಟ ಮತ್ತು ರೋಗಕಾರಕಗಳ ಪ್ರತಿರೋಧಕ ಶಕ್ತಿ ಹೆಚ್ಚುವಿಕೆ, ಪರಿಸರ ಮಾಲಿನ್ಯವನ್ನು ಸೃಷ್ಟಿಸುವುದು ಮತ್ತು ಮಾನವನ ಆರೋಗ್ಯಕ್ಕೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುವುದು ಅಥವಾ ಆಹಾರದ ಮೇಲೆ ರಾಸಾಯನಿಕಗಳ ಉಳಿಕೆ  ಹೀಗೆ ಮುಂತಾದ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗುತ್ತಿದೆ.

 

 

ಸೂಕ್ಷ್ಮಜೀವಿಗಳನ್ನು ಬಳಸಿಕೊಂಡು, ಕೀಟ ಮತ್ತು ರೋಗಗಳನ್ನು ನಿರ್ವಹಣೆ ಅಂದರೆ ಕೀಟ ಮತ್ತು ರೋಗಗಳ ಜೈವಿಕ ನಿಯಂತ್ರಣ ರಾಸಾಯನಿಕ ಕೀಟನಾಶಕಗಳ ಬಳಕೆಗೆ ಪರ್ಯಾಯ ಮಾರ್ಗವಾಗಿದೆ. ಅದಾಗ್ಯೂ, ಕೀಟ ಮತ್ತು ರೋಗಗಳ ಜೈವಿಕ ನಿಯಂತ್ರಣವು ಕಡಿಮೆ ವೆಚ್ಚದ ಒಂದು ಪರಿಣಾಮಕಾರಿ ತಂತ್ರಜ್ಞಾನವಾಗಿದ್ದು ಹೆಚ್ಚು ಪ್ರಯೋಜನಕಾರಿ ವಿಧಾನವಾಗಿದೆ. ಏಕೆಂದರೆ, ಇದರಿಂದ ಪರಿಸರ ಮಾಲಿನ್ಯತೆ ಉಂಟಾಗುವುದಿಲ್ಲ ಹಾಗೂ ಮನುಷ್ಯನ ಆರೋಗ್ಯದ ಮೇಲೆಯೂ ಕೂಡ ದುಷ್ಪರಿಣಾಮ ಬೀರುವುದಿಲ್ಲ. ಸೂಕ್ಷ್ಮ ಜೀವಿಗಳು ಕೀಟ ಹಾಗೂ ರೋಗಾಣುಗಳ ಹತೋಟಿ ಮಾಡುವುದರ ಜೊತೆಗೆ ಇತರೆ ಉಪಕಾರಿ ಕೀಟಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ ಜೊತೆಗೆ ಮಣ್ಣಿನ ಫಲವತ್ತತೆಯನ್ನೂ ಸಹ ಹೆಚ್ಚಿಸುತ್ತದೆ.

 

 

ಕೀಟಗಳು ಮತ್ತು ರೋಗಗಳ ಜೈವಿಕ ನಿಯಂತ್ರಣಕ್ಕಾಗಿ ವಿವಿಧ ರೀತಿಯ ಸೂಕ್ಷ್ಮ ಜೀವಿಗಳನ್ನು ಜೈವಿಕ ಪೀಡೆನಾಶಕಗಳಾಗಿ ಬಳಸಲಾಗುತ್ತದೆ, ಅವುಗಳಲ್ಲಿ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ವೈರಸ್‌ಗಳು ಮತ್ತು ನೆಮಟೋಡ್‌ಗಳು ಪ್ರಮುಖ ಪಾತ್ರವಹಿಸುತ್ತವೆ.

 

 

ಜೈವಿಕ ಪೀಡೆನಾಶಕಗಳ ಪ್ರಯೋಜನಗಳು

  1. ಸಾಂಪ್ರದಾಯಿಕ ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಬೆಳೆಯಲ್ಲಿ ಇಳುವರಿ ಕುಂಠಿತವಾಗದಂತೆ ಕಾಪಾಡುತ್ತದೆ
  2. ಜೈವಿಕ ಪೀಡೆನಾಶಕಗಳು ಸಮಸ್ಯಾತ್ಮಕ ಕೀಟಗಳನ್ನು ಮಾತ್ರ ಕೊಲ್ಲುತ್ತವೆ (ಆದರೆ ರಾಸಾಯನಿಕ ಕೀಟನಾಶಕಗಳು ಸಮಸ್ಯಾತ್ಮಕ ಕೀಟಗಳ ಜೊತೆ ಇನ್ನಿತರ ಜೀವಿಗಳಾದ ಇತರೆ ಗಿಡಗಳು, ಉಪಯುಕ್ತ ಕೀಟಗಳು, ಪ್ರಾಣಿ ಪಕ್ಷಿ ಹಾಗೂ ಮಾನವನಿಗೂ ಸಹ ಹಾನಿಯನ್ನು ಉಂಟುಮಾಡುತ್ತವೆ)

 

  1. ಜೈವಿಕ ಪೀಡೆನಾಶಕಗಳು ಬಹಳ ಕಡಿಮೆ ಪ್ರಮಾಣದಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತವಾಗಿ ಕೊಳೆಯುತ್ತದೆ
  2. ಜೈವಿಕ ಪೀಡೆನಾಶಕಗಳನ್ನು ಇತರೆ ಜೈವಿಕ ಪೀಡೆನಾಶಕಗಳೊಂದಿಗಿನ ಪರ್ಯಾಯವಾಗಿ ಒಂದರ ಬದಲು ಮತ್ತೊಂದರಂತೆ ಬಳಸುವುದರಿಂದ ಪ್ರತಿರೋಧದ ಸಮಸ್ಯೆಗಳನ್ನು ತಪ್ಪಿಸಿ ಸೂಕ್ತವಾದ ಕೀಟ ನಿರ್ವಹಣೆಗೆ ಕಾರಣವಾಗುತ್ತದೆ
  3. ಜೈವಿಕ ಪೀಡೆನಾಶಕಗಳ ಸಿಂಪರಣೆ ನಂತರ ಕೊಯ್ಲಿಗಾಗಿ ಕಾಯುವ ಅವಧಿ ಇರುವುದಿಲ್ಲ (ಆದರೆ ರಾಸಾಯನಿಕ ಕೀಟನಾಶಕಗಳ ಬಳಕೆಯಲ್ಲಿ ತಕ್ಷಣ ಕೊಯ್ಲು ಮಾಡಲು ಸಾಧ್ಯವಿಲ್ಲ, ಮಾಡಿದಲ್ಲಿ ರಾಸಾಯನಿಕಗಳ ಉಳಿಕೆ ಆಹಾರದ ಮೇಲೆ ಉಳಿಯುತ್ತವೆ)
  4. ಅಂತಿಮವಾಗಿ, ಜೈವಿಕ ಪೀಡೆನಾಶಕಗಳ ಬಳಕೆಯು ಸಾಮಾನ್ಯವಾಗಿ ಸೇವಿಸುವ ಯಾವುದೇ ರಾಸಾಯನಿಕಳ ಉಳಿಕೆ ಇಲ್ಲದಿರುವ ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ನೀಡುತ್ತದೆ

 

 

I. ಕೀಟಗಳ ಜೈವಿಕ ನಿಯಂತ್ರಣ

ಜೈವಿಕ ಕೀಟನಾಶಕಗಳಾದ ಬ್ಯಾಕ್ಟೀರಿಯಾ- (ಬ್ಯಾಸಿಲಸ್ ಥುರಿಂಜಿಯೆನ್ಸಿಸ್), ಶಿಲೀಂಧ್ರಗಳು (ಬ್ಯೂವೇರಿಯಾ, ಮೆಟಾರೈಜಿಯಂ, ವರ್ಟಿಸಿಲಿಯಮ್, ನಿವೊರಿಯಮ್), ವೈರಸ್ (ಎನ್‌ಪಿವಿ), ಇತ್ಯಾದಿಗಳನ್ನು ಕೃಷಿಯಲ್ಲಿನ ವಿವಿಧ ಕೀಟಗಳ ನಿಯಂತ್ರಣಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೈವಿಕ ಕೀಟನಾಶಕಗಳು ಕೀಟಗಳಿಗೆ ಹಾನಿಕಾರಕವಾದ ಜೈವಿಕ ವಸ್ತುಗಳನ್ನು (ಪ್ರೋಟೀನ್) ಉತ್ಪಾದಿಸುತ್ತವೆ ಈ ರೀತಿಯಲ್ಲಿ ಕೀಟಗಳನ್ನು ಕೊಲ್ಲುತ್ತವೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಜೈವಿಕ ಕೀಟನಾಶಕಗಳನ್ನು @ 1 ಗ್ರಾಂ / ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

 

 

 

 

ಸೂಚನೆ: ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಸೂಕ್ಷ್ಮಜೀವಿಯು ರೇಷ್ಮೆ ಹುಳುಗಳನ್ನು ಕೊಲ್ಲುತ್ತದೆ ಆದ್ದರಿಂದ ಇದನ್ನು ರೇಷ್ಮೆ ಕೃಷಿಯಲ್ಲಿ ಜೈವಿಕ ಕೀಟ ನಿಯಂತ್ರಣಕ್ಕೆ ಬಳಸಬಾರದು.

 

ಕೀಟಗಳ ಜೈವಿಕ ನಿಯಂತ್ರಣಕ್ಕಾಗಿ ಎನ್‌ಪಿವಿ (NPV) ನಂಜಾಣುವನ್ನು (ನ್ಯೂಕ್ಲಿಯರ್ ಪಾಲಿಹೆಡ್ರೋಸಿಸ್ ವೈರಸ್) ಅನ್ನು ಎಲ್ಲಾ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಮುಖ್ಯವಾಗಿ (ಪತಂಗಗಳು ಮತ್ತು ಚಿಟ್ಟೆಗಳನ್ನು) ಕಾಯಿಕೊರಕವನ್ನು ನಿಯಂತ್ರಿಸಲು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕಾಟನ್ (ಕಾಯಿಕೊರಕ), ಬೇಳೆ ಕಾಳುಗಳಾದ ಕಡಲೆ, ತೊಗರಿ, ಇತ್ಯಾದಿ ಬೆಳೆಗಳಲ್ಲಿ ಕಾಯಿಕೊರಕ, ಮೆಣಸಿನಕಾಯಿ ಮತ್ತು ಕ್ಯಾಪ್ಸಿಕಂ (ಹಣ್ಣು ಕೊರಕ), ಇನ್ನೂ ಹಲವಾರು ಬೆಳೆಗಳಲ್ಲಿ ಸ್ಪೊಡೋಪ್ಟೆರಾ ಲಿಟುರಾ ಮತ್ತು ಹೆಲಿಕೊವರ್ಪಾ ಆರ್ಮಿಗೇರಾವನ್ನು ನಿಯಂತ್ರಿಸಲು ಎನ್‌ಪಿವಿ ಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

 

ಹತ್ತಿ ಬೆಳೆಯಲ್ಲಿ ಎನ್‌ಪಿವಿ @ 200 ಎಲ್‌. ಪ್ರತಿ ಎಕರೆಗೆ ಸಿಂಪಡಿಸಬೇಕು. ದ್ವಿದಳ ಧಾನ್ಯ, ಬೇಳೆಕಾಳು ಹಾಗೂ ಇತರ ತರಕಾರಿ ಬೆಳೆಗಳಲ್ಲಿ ಪ್ರತಿ ಎಕರೆಗೆ 100 ಎಲ್‌. ಈ ಎನ್‌ಪಿವಿ ಸಿಂಪಡಿಸಬೇಕು.

 

II. ರೋಗಗಳ ಜೈವಿಕ ನಿಯಂತ್ರಣ

ಜೈವಿಕ ರೋಗನಾಶಕಗಳಾದ ಬ್ಯಾಕ್ಟೀರಿಯಾ (ಬ್ಯಾಸಿಲಸ್ ಸಬ್ಟಿಲಿಸ್, ಸ್ಯೂಡೋಮೊನಾಸ್ ಫ್ಲೋರೊಸೆನ್ಸ್), ಶಿಲೀಂಧ್ರಗಳನ್ನು (ಟ್ರೈಕೊಡರ್ಮಾ ಸ್ಪೀಸೀಸ್, ಪೆಸಿಲೋಮೈಸಸ್ ಲಿಲಾನ್ಸಿನಸ್, ಪೊಚೋನಿಯಾ ಕ್ಲಮೈಡೋಸ್ಪೊರಿಯಾ, ಇತ್ಯಾದಿ) ವಾಣಿಜ್ಯಿಕವಾಗಿ ಬೆಳೆಯುವ ಹಲವಾರು ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಮಣ್ಣು ಮತ್ತು ಬೀಜದಿಂದ ಹರಡುವ ವಿವಿಧ ರೋಗಗಳನ್ನು ಹಾಗೂ ಮಣ್ಣಿನಲ್ಲಿರುವ ಬೇರು ಜಂತು ಹುಳುಗಳನ್ನು ನಿಯಂತ್ರಿಸಲು ವ್ಯಾಪಕವಾಗಿ ಬಳಸುತ್ತಾರೆ.

 

 

 

 

ಜೈವಿಕ ರೋಗನಾಶಕಗಳನ್ನು ವಿವಿಧ ಬೆಳೆಗಳಲ್ಲಿ ಹಲವು ರೀತಿಯಲ್ಲಿ ಉಪಯೋಗಿಸಬಹುದು. ಬೀಜೋಪಚಾರ, ಸಸಿಗಳ ಬೇರುಗಳ ಉಪಚಾರ, ಎಲೆಗಳ ಮೇಲೆ ಸಿಂಪಡಿಸುವಿಕೆ ಅಥವಾ ನಾಟಿ ಮಾಡುವ ಮೊದಲು ಮಣ್ಣಿಗೆ ಸೇರಿಸುವುದು ಮುಂತಾದ ವಿಧಾನಗಳಲ್ಲಿ ಬಳಸಬಹುದು. ಜೈವಿಕ ರೋಗನಾಶಕಗಳು ಮಣ್ಣಿನಲ್ಲಿರುವ ರೋಗಕಾರಕಗಳನ್ನು ಹಾಗೂ ಅವುಗಳಿಂದ ಹರಡುವ ಪ್ರಮುಖ ರೋಗಗಳಾದ ಬಾಡು ರೋಗ, ಬುಡಕೊಳೆ ರೋಗ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡುತ್ತವೆ.

 

 

ಈ ನಿಟ್ಟಿನಲ್ಲಿ, ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ಜೈವಿಕ ಪೀಡಿನಾಶಕಗಳನ್ನು ಬಳಸುವುದರ ಮೂಲಕ ಮಣ್ಣಿನ ಸೂಕ್ಷ್ಮ ಜೀವಿಗಳ ಮೇಲೆ ಪರಿಣಾಮ ಬೀರುವ ಕೃಷಿ ಪದ್ಧತಿಗಳಾದ ರಾಸಾಯನಿಕಗಳ ಸಿಂಪರಣೆಯನ್ನು ತಡೆದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಜೈವಿಕ ಗೊಬ್ಬರಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಮಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಬೆಳೆಗೆ ಒದಗಿಸಿ, ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಪರಿಸರ ಸ್ನೇಹಿಯಾಗಿರುವ ಸೂಕ್ಷ್ಮಜೀವಿಗಳು (ಜೈವಿಕ ಪೀಡೆನಾಶಕಗಳು), ಸಮಗ್ರ ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ಅತ್ಯುತ್ತಮ ಸಾಧನವಾಗಿದ್ದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಪ್ರಯೋಜನಕಾರಿ ಅಂಶಗಳಾಗಿವೆ.

 


Leave a comment

यह साइट reCAPTCHA और Google गोपनीयता नीति और सेवा की शर्तें द्वारा सुरक्षित है.


Explore more

Share this