ಮಣ್ಣಿನ ಆರೋಗ್ಯ ಸಂರಕ್ಷಣೆಯಲ್ಲಿ "ಮಾಗಿ ಉಳುಮೆ" ಯ ಮಹತ್ವ

ಕೃಷಿಯಲ್ಲಿ ನೈಸರ್ಗಿಕವಾಗಿ ದೊರೆಯುವ ಮಣ್ಣಿಗೆ ಅತ್ಯಮೂಲ್ಯವಾದ ಮಹತ್ವ ಹೊಂದಿದ್ದು, ಯಾವುದೇ ಬೆಳೆಯ ಉತ್ತಮ ಬೆಳವಣಿಗೆ ಹಾಗೂ ಇಳುವರಿಯು ಮಣ್ಣಿನ ಫಲವತ್ತತೆಯ ಮೇಲೆ ಅವಲಂಭಿಸಿರುತ್ತದೆ. ಒಂದು ಸಮೀಕ್ಷೆ ಪ್ರಕಾರ 2030ರ ಒಳಗಾಗಿ ಶೇ. 75 ರಷ್ಟು ಮಣ್ಣು ಆರೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆ ನಮ್ಮೆಲ್ಲರಿಗಿದೆ. ಹೀಗಾಗಿ ರೈತ ಬಾಂಧವರು ಮಣ್ಣಿನ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.

 

ಆದರೆ ಬಹುತೇಕ ರೈತರು ಮಣ್ಣು ಪರೀಕ್ಷೆ ಮಾಡಿಸದೆ ಪ್ರತಿ ವರ್ಷ ತಮಗಿಷ್ಟವಾದ ಬೆಳೆಗಳನ್ನು ಬೆಳೆಯುತ್ತಿದ್ದು, ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳ ಸರಿಯಾದ ಮಾಹಿತಿಯಿಲ್ಲದೇ ಅನಾವಶ್ಯಕವಾಗಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದರಿಂದ ಮಣ್ಣಿನಲ್ಲಿರುವ ಪ್ರಮುಖ ಪೋಷಕಾಂಶಗಳು ನಾಶವಾಗಿ ಕ್ರಮೇಣ ಭೂಮಿಯು ಬರಡಾಗುತ್ತಿದೆ. ಅದಕ್ಕಾಗಿ ರೈತರು ತಮ್ಮ ಜಮೀನಿನ ಮಣ್ಣನ್ನು ಪ್ರತಿ ಬಿತ್ತನೆಗೆ ಮೊದಲು ವೈಜ್ಞಾನಿಕವಾಗಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಮಣ್ಣು ಪರೀಕ್ಷೆ ಮಾಡಿಸಿ, ಅದರ ವರದಿ ಆಧಾರದ ಮೇಲೆ ಬೆಳೆ ಆಯ್ಕೆ ಮತ್ತು ರಸಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬೇಕು.

ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗುತ್ತಿರುವ ಇಂದಿನ ದಿನಗಳಲ್ಲಿ ಅವಶ್ಯಕತೆ ಮೇರೆಗೆ ಕೊರತೆಯಿರುವ ಪೋಷಕಾಂಶಗಳನ್ನು ಒದಗಿಸಿ, ಅಗತ್ಯವಿದ್ದಷ್ಟು ಗೊಬ್ಬರಗಳನ್ನು ಮಾತ್ರ ಕೊಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವುದಲ್ಲದೆ ಮಾನವ ಹಾಗೂ ಮಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ಲಾಭದಾಯಕವಾಗಿ ಕಂಡುಬಂದಿದೆ.

 

ಹದವಾಗಿ ಮಳೆಯಾಗುವ ಮುನ್ನ ಹಾಗೂ ಮಳೆ ಬಿದ್ದ ಸಮಯದಲ್ಲಿ ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಬಹುಪಯೋಗಿ ಕೃಷಿ ಚಟುವಟಿಕೆಯಾದ ಮಾಗಿ ಉಳುಮೆಯಂತಹ ಸಾಂಪ್ರದಾಯಿಕ ಪದ್ದತಿಗಳನ್ನು ರೈತರು ಕೈಗೊಳ್ಳುವುದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆಯನ್ನು ಪಡೆಯಯಬಹುದು. ಇದರಿಂದ ಅನೇಕ ಉಪಯೋಗಗಳಿದ್ದು, ಮಣ್ಣಿನ ಆರೋಗ್ಯ ಕಾಪಾಡುವುದರ ಜೊತೆಗೆ ರಾಸಾಯನಿಕಮುಕ್ತ ಕೃಷಿಯನ್ನು ಕೈಗೊಂಡು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದಾಗಿದೆ.

 

ಕೃಷಿಯ ಅತ್ಯಂತ ಪುರಾತನ ಚಟುವಟಿಕೆಯಾಗಿರುವ ಮಾಗಿ ಉಳುಮೆಗೆ ಮೊದಲಿನಿಂದಲೂ ಎಲ್ಲಿಲ್ಲದ ಮಹತ್ವವಿದೆ. ಆದರೆ ಇತ್ತಿಚಿನ ದಿನಗಳಲ್ಲಿ ರೈತರು ಇದರೆಡೆಗೆ ನಿರ್ಲಕ್ಷ ತೋರುತ್ತಿದ್ದು ಮಣ್ಣಿನ ಅರೋಗ್ಯ ಹಾಳಾಗಿ ಭೂಮಿಗಳು ಬರಡಾಗುತ್ತಿವೆ. ಇದರ ಜೊತೆಯಲ್ಲೇ ಮಾನವನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ ಏಕೆಂದರೆ ಪೋಷಕಾಂಶ ಕೊರತೆಯಿರುವ ಮಣ್ಣು ಮಾನವನ ಆರೋಗ್ಯಕ್ಕೆ ಅಗತ್ಯವಾದ ಪೌಷ್ಟಿಕಯುಕ್ತ ಆಹಾರ ಉತ್ಪಾದಿಸಲು ಎಂದಿಗೂ ಸಾಧ್ಯವಿಲ್ಲ.

ಮಾಗಿ ಉಳುಮೆ: ಮಾಗಿ ಉಳುಮೆ ಎಂಬುವುದು ಮುಂಗಾರಿಗೂ ಮೊದಲು  ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬಹುದಾದ ಕಡಿಮೆ ಖರ್ಚಿನ ಆದರೆ ಬಹು ಉಪಯೋಗಿ ಕೃಷಿ ಚಟುವಟಿಕೆಯಾಗಿದೆ.

 

ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು:

  1. ಜಮೀನಿನ ಮಣ್ಣಿನ ಮೇಲೆ ಅನುಕೂಲಕರ ಪರಿಣಾಮ

ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದಂತೆ ಹರಗಿ ಬಿತ್ತನೆ ಮಾಡಲು ಸುಲಭವಾಗುತ್ತದೆ. ಮಾಗಿ ಉಳುಮೆಯಿಂದ ಕೃಷಿ ಭೂಮಿಯಲ್ಲಿನ ಮಣ್ಣು ತಿರುವು ಮುರುವಾಗಿ ಸಡಿಲವಾಗುವುದರಿಂದ ಬಿದ್ದಂತಹ ಮಳೆ ನೀರು ಸುಲಭವಾಗಿ ಅಲ್ಲಿಯೇ ಇಂಗಿ ಭೂಮಿಯ ಅಂತರಜಲ ಮಟ್ಟ ಹೆಚ್ಚುವುದಲ್ಲದೆ ತೇವಾಂಶದ ಪ್ರಮಾಣ ಅಧಿಕವಾಗುವುದು.

 

ಉಳುಮೆಯ ಸಮಯದಲ್ಲಿ ಮಣ್ಣು ಸಡಿಲಾಗುವುದರಿಂದ ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಭೂಮಿಯಲ್ಲಿ ಇಂಗುವದಕ್ಕೆ ಸಹಾಯವಾಗಿ ಸಹಕಾರಿಯಾಗುವುದರ ಜೊತೆಗೆ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ಸದೃಢ ಸಸಿಗಳ ಸಂಖ್ಯೆ ಏರಿ ಅಧಿಕ ಇಳುವರಿ ಪಡೆಯಲು ಅನುಕೂಲಕರವಾಗುತ್ತದೆ. ಮಣ್ಣಿನ ಮೇಲ್ಪದರ ಸಡಿಗೊಂಡಿರುವುದರಿಂದ ಬೇರುಗಳು ಸರಾಗವಾಗಿ ಆಳಕ್ಕೆ ಇಳಿದು ಬೆಳೆಗಳ ಬೆಳವಣಿಗೆಯಿಂದ ಉತ್ತಮ ಫಸಲನ್ನು ಪಡೆಯಬಹುದು.

ಸೂಚನೆ: ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣು, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹಣೆ ಹಾಗೂ ಅದರ ದಕ್ಷ ಉಪಯೋಗವನ್ನು ಪಡಯಬಹುದು

  1. ಕಳೆಗಳ ನಿಯಂತ್ರಣ

ಮಾಗಿ ಉಳುಮೆ ಕೈಗೊಳ್ಳುವ ಮೂಲಕ ಹುಲ್ಲು ಗರಿಕೆ ಹಾಗೂ ಜೇಕಿನ ಗಡ್ಡೆಗಳನ್ನು ಮತ್ತು ಇನ್ನಿತರ ಕಳೆಗಳ ಅವಶೇಷಗಳನ್ನು ಸುಲಭವಾಗಿ ಬೇರುಸಮೇತ ಆರಿಸಿ ತೆಗೆಯಲು ಸಹಾಯವಾಗುವುದರಿಂದ ಮುಂದಿನ ದಿನಗಳಲ್ಲಿ ಬೆಳೆಗಳಲ್ಲಿ ಇಂತಹ ಕಳೆಗಳು ಬಾರದಂತೆ ಪ್ರಥಮ ಹಂತದಲ್ಲಿಯೇ ಹತೋಟಿ ಮಾಡಬಹುದು. ಈ ಚಟುವಟಿಕೆಯನ್ನು ಕೈಗೊಳ್ಳುವುದರಿಂದ ಕಳೆಗಳ ನಿಯಂತ್ರಣಕ್ಕಾಗಿ ತಗಲುವ ಕೂಲಿ ಮತ್ತು ಕಳೆನಾಶಕಗಳ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.

  1. ಕೀಟಗಳು ಮತ್ತು ರೋಗಾಣುಗಳ ನಿಯಂತ್ರಣ

ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಸಂಬಂಧಿಸಿದ ಕೀಟಗಳ ಕೋಶ ಮತ್ತು ಅವುಗಳ ತತ್ತಿಗಳು ಭೂಮಿಯಲ್ಲಿ ಉಳಿದಿದ್ದು, ಮಾಗಿ ಉಳುಮೆಯಿಂದ ಸೂರ್ಯನ ಶಾಖಕ್ಕೆ ಒಗ್ಗಿ ಜಮೀನಿನ ಒಳಗೆ ಇರುವಂಥಹ ಎಲ್ಲಾ ಕೀಟಗಳು ಮತ್ತು ಸಸ್ಯ ರೋಗಗಳ ರೋಗಾಣುಗಳನ್ನು ಕೋಶದ ಹಂತದಲ್ಲಿಯೇ ಕೊಂದುಹಾಕಿ, ಕಡಿಮೆ ಖರ್ಚಿನಲ್ಲಿ ಕೀಟ ರೋಗಗಳ ಹತೋಟಿ ಮಾಡಲು ಅನುಕೂಲವಾಗುತ್ತದೆ, ಈ ರೀತಿಯಲ್ಲಿ ಮುಂದೆ ಆಗಬಹುದಾದ ಹೆಚ್ಚಿನ ಕೀಟ ರೋಗಗಳ ಹಾವಳಿಯನ್ನು ಪ್ರಾಥಮಿಕ ಹಂತದಲ್ಲಿಯೇ ನಿಯಂತ್ರಿಸಿ ಕೀಟನಾಶಕಗಳು ಮತ್ತು ಪೀಡೆನಾಶಕಗಳಿಗೆ ತಗಲುವ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸಬಹುದು. ಇದರ ಜೊತೆಗೆ ಕೀಟನಾಶಕಮುಕ್ತ ಸುರಕ್ಷಿತ ಬೆಳೆಯನ್ನು ಬೆಳೆಯಲು ಸಹಾಯ ಮಾಡುತ್ತದೆ. 

  1. ನೈಸರ್ಗಿಕ ಹಾಗೂ ಜೈವಿಕ ಪರಿಸರದ ಮೇಲೆ ಅನುಕೂಲಕರ ಪರಿಣಾಮ

ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳು ಹೊರಕ್ಕೆ ಒಗ್ಗುವುದರಿಂದ, ಅವುಗಳನ್ನು ಕೊಕ್ಕರೆ ಮತ್ತು ಮುಂತಾದ ಪಕ್ಷಿಗಳು ಹೆಕ್ಕಿ ತಿನ್ನುವುದರಿಂದ ಜೈವಿಕ ನಿಯಂತ್ರಣದಿಂದ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ಮಣ್ಣಿನ ಆರೋಗ್ಯ, ಪರಿಸರ ಮತ್ತು ಆಹಾರವನ್ನು ರಾಸಾಯನಿಕಗಳ ಬಳಕೆಯಿಲ್ಲದೆ ಅಥವಾ ಕಡಿಮೆಗೊಳಿಸಬಹುದು. ಜೊತೆಗೆ ಮಣ್ಣಿನಲ್ಲಿ ಜೈವಿಕ ಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.

 

  1. ಬೆಳೆ ಉಳಿಕೆಗಳು

ಬೆಳೆಯನ್ನು ಕಟಾವು ಮಾಡಿದ ನಂತರ ಮಾಗಿ ಉಳುಮೆ ಕೈಗೊಳ್ಳುವುದರಿಂದ ಉಳಿದ ಬೆಳೆ ಉಳಿಕೆಗಳು ಮತ್ತು ತ್ಯಾಜ್ಯವಸ್ತುಗಳು ಮಣ್ಣಿನಲ್ಲಿ ಬೇಗನೆ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುತ್ತದೆ. ಇದರಿಂದ ಕೃಷಿ ಪರಿಸರದಲ್ಲಿ ಸಾವಯವ ಪದಾರ್ಥಗಳ ಬಳಕೆಯಾಗುವುದಲ್ಲದೆ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸುತ್ತದೆ. ಮಣ್ಣು ಹೆಚ್ಚು ಫಲವತ್ತಾಗುವುದರಿಂದ  ಸ್ವಾಭಾವಿಕ ಕ್ರಿಯೆಗಳನ್ನು ತ್ವರಿತಗೊಳಿಸುತ್ತದೆ.

 

ಕೊನೆಯದಾಗಿ ಹೇಳುವುದಾದರೆ ನಮ್ಮ ಎಲ್ಲಾ ರೈತರು ಬೇಸಿಗೆಯಲ್ಲಿ ಹಾಗೂ ಹಿಂಗಾರು ಬೆಳೆಯ ಕಟಾವಿನ ನಂತರ ಮಾಗಿ ಉಳುಮೆ ಕೈಗೊಂಡು ನೈಸರ್ಗಿಕ ಹಾಗೂ ಜೈವಿಕ ವಿಧಾನಗಳಿಂದ ಪ್ರಕೃತಿದತ್ತವಾದ ಮಣ್ಣಿನ ಸಂಪತ್ತನ್ನು ಸಂರಕ್ಷಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ಸಮರ್ಪಕ ರೀತಿಯಿಂದ ಮಣ್ಣನ್ನು ಬಳಸುವುದು ನಮ್ಮ ಕೈಯಲ್ಲಿಯೇ ಇದೆ. ಈ ನಿಟ್ಟಿನಲ್ಲಿ ರೈತರು ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಅದರ ಫಲಿತಾಂಶ ಆಧರಿಸಿದ ಮೇಲೆ ಬೆಳೆಗಳಿಗೆ ಸಮತೋಲನ ಹಾಗೂ ಅವಶ್ಯಕತೆ ಮೇರೆಗೆ ರಸಗೊಬ್ಬರಗಳನ್ನು ಬಳಸಿದರೆ ಭೂಮಿಯ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಅಂದರೆ ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಈ ರೀತಿಯಲ್ಲಿ ರೈತರು ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ಅಧಿಕ ಇಳುವರಿ ಪಡೆಯುವ ಮೂಲಕ ತಮ್ಮ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬಹುದು.       

*********

Dr. Asha, K.M.,

BigHaat

 ______________________________________________________________

ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ  ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ.    8050797979 ಗೆ  ವಾಟ್ಸಾಪ್ ಕೂಡ ಮಾಡಬಹುದು. 

____________________________________________________________

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.

 

                                                    **************


Leave a comment

यह साइट reCAPTCHA और Google गोपनीयता नीति और सेवा की शर्तें द्वारा सुरक्षित है.


Explore more

Share this